ಜೀವನಗೂಲಿ	
ಒಂದು ಸಾಮಾನ್ಯ ಕಾರ್ಮಿಕ ಸಂಸಾರದ ಜೀವನ ನಿರ್ವಹಣೆಗೆ ಅಗತ್ಯವಾಗಿ ಕಾರ್ಮಿಕನಿಗೆ ಸಲ್ಲಬೇಕಾದ ಕೂಲಿ, ಜೀವನನಿರ್ವಾಹ ಕೂಲಿ (ಲಿವಿಂಗ್ ವೇಜ್), ಕಾರ್ಮಿಕರ ಕೂಲಿಯನ್ನು ನಿರ್ಣಯಿಸುವಾಗ ಪರಿಗಣನೆಗೆ ಬರುವ ಪರಿಕಲ್ಪನೆ, ಆಸ್ಟ್ರೇಲಿಯ, ನ್ಯೂಜಿûಲೆಂಡ್, ಕೆನಡ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ದಕ್ಷಿಣ ಆಫ್ರಿಕ, ಮೆಕ್ಸಿಕೋ, ಹಂಗರಿ ಮುಂತಾದ ರಾಷ್ಟ್ರಗಳಲ್ಲಿ ಶ್ರಮಗಾರರ ಕೂಲಿ ನಿರ್ಧರಿಸುವಲ್ಲಿ ಇದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಭಾರತದಲ್ಲೂ 1948ರಲ್ಲಿ ನ್ಯಾಯ ಕೂಲಿ ಸಮಿತಿ ಕಾರ್ಮಿಕರಿಗೆ ನ್ಯಾಯವಾದ ಕೂಲಿಯನ್ನು ಶಿಫಾರಸು ಮಾಡುವಾಗ ಜೀವನಗೂಲಿಯನ್ನು ಗಮನದಲ್ಲಿರಿಸಿಕೊಂಡಿದ್ದು, ಆ ದೃಷ್ಟಿಯಿಂದ ನ್ಯಾಯಕೂಲಿಯನ್ನು ವ್ಯಾಖ್ಯಿಸಿದೆ.

	ಜೀವನಗೂಲಿ ವಾಸ್ತವವಾಗಿ ಅಸ್ಪಷ್ಟ, ಅನಿರ್ದಿಷ್ಟ, ಅಸ್ಥಿರ. ಇದು ಕಾರ್ಮಿಕರ ಮತ್ತು ಅವರ ಕುಟುಂಬಗಳ ಕಾಲ, ಸ್ಥಳ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಜೀವನ ನಿರ್ವಾಹಕ್ಕೆ ಅಗತ್ಯವಾದ ಕೂಲಿ ಎಷ್ಟು ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಅವರವರ ಅಗತ್ಯಗಳಿಗನುಗುಣವಾಗಿ ಒಂದು ಕನಿಷ್ಠ ಕೂಲಿಯನ್ನು ಒದಗಿಸುವುದೇ ಇದರ ಉದ್ದೇಶ. ಇಲ್ಲಿ ಕಾರ್ಮಿಕರೆಂದರೆ ಕನಿಷ್ಠ ದರ್ಜೆಯ ಕಾರ್ಮಿಕರು. ಕುಶಲತೆಯನ್ನು ಪಡೆದ ಮೇಲ್ದರ್ಜೆಯ ಕಾರ್ಮಿಕರಲ್ಲ. ಜೀವನಗೂಲಿ ಸಾಮಾನ್ಯವಾಗಿ ಕನಿಷ್ಠ ದರ್ಜೆಯ ದೈಹಿಕ ಶ್ರಮದಾರರಿಗೇ ಸಂಬಂಧಪಟ್ಟದ್ದೆಂದು ಹೇಳಬಹುದು. ಕೌಶಲ ಅಥವಾ ನೈಪುಣ್ಯ ಪಡೆದ ಮೇಲ್ದರ್ಜೆಯ ಕೆಲಸಗಾರರ ಕೂಲಿ ಅವರವರ ಉತ್ಪಾದಕತೆಯನ್ನು ಅವಲಂಬಿಸಿರುವುದರಿಂದ, ಅವರಿಗೆ ಜೀವನ ನಿರ್ವಾಹ ಕೂಲಿಯನ್ನು ನಿಗದಿಸಬೇಕಾದ ಪ್ರಮೇಯವಿರುವುದಿಲ್ಲ. ಪ್ರತಿಯೊಬ್ಬ ಕೆಲಸಗಾರನೂ ಜೀವನ ನಿರ್ವಾಹಕ್ಕೆ ಅಗತ್ಯವಾದ ಕನಿಷ್ಠ ಕೂಲಿ ಪಡೆಯಲು ಅರ್ಹನಾಗಿರುತ್ತಾನೆ: ಈ ಕೂಲಿ ಅವನ ಮತ್ತು ಅವನ ಕುಟುಂಬದ ಸದಸ್ಯರ ಆರೋಗ್ಯವನ್ನೂ ಅವರ ಕಾರ್ಯದಕ್ಷತೆಯನ್ನೂ ಕಾಪಾಡಲು ಅಗತ್ಯವಾಗಿರುತ್ತದೆ-ಎಂಬುದು ಜೀವನಗೂಲಿಯ ಪ್ರತಿಪಾದಕರ ವಾದ. ಆದ್ದರಿಂದ ಈ ಕೂಲಿಗೂ ಕಾರ್ಮಿಕರು ಸಲ್ಲಿಸುವ ಸೇವೆಯ ಅಥವಾ ಉತ್ಪಾದನೆಯ ಮೌಲ್ಯಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಆದ್ದರಿಂದ ಜೀವನ ನಿರ್ವಾಹ ಕೂಲಿ ಆರ್ಥಿಕಕ್ಕಿಂತ ನೈತಿಕವೆನ್ನಬಹುದಾದ್ದು.

	 ಜೀವನ ನಿರ್ವಾಹ ಕೂಲಿಯ ಬಗ್ಗೆ ಅನೇಕ ವ್ಯಾಖ್ಯೆಗಳುಂಟು. ಇವುಗಳಲ್ಲಿ ಮುಖ್ಯವಾದವನ್ನು ಪರಿಶೀಲಿಸಿದಾಗ ಜೀವನ ನಿರ್ವಾಹ ಕೂಲಿಯ ಅರ್ಥವ್ಯಾಪ್ತಿಯ ಅರಿವಾಗುತ್ತದೆ. 1907ರಲ್ಲಿ ಆಸ್ಟ್ರೇಲಿಯದ ಕಾಮನ್ವೆಲ್ತ್ ಕನ್ಸಿಲಿಯೇಷನ್ ಕೋರ್ಟಿನಲ್ಲಿ ನಡೆದ ಹಾರ್ವೆಸ್ಟರ್ ವ್ಯವಹರಣೆಯಲ್ಲಿ (ಕೇಸ್) ಜೀವನ ನಿರ್ವಾಹ ಕೂಲಿಯ ಬಗ್ಗೆ ಜಸ್ಟಿಸ್ ಹಿಗಿನ್ಸ್ ಕೊಟ್ಟ ವ್ಯಾಖ್ಯೆ ಮುಖ್ಯವಾದ್ದು. ಅದರ ಪ್ರಕಾರ ನಾಗರಿಕ ಸಮಾಜದಲ್ಲಿ ಸಾಮಾನ್ಯ ಕಾರ್ಮಿಕ ತಾನು ಮನುಷ್ಯನಂತೆ ಜೀವನ ನಿರ್ವಹಿಸಲು ಬೇಕಾಗುವ ಅಗತ್ಯಗಳೆಲ್ಲವನ್ನೂ ಪೂರೈಸುವ ಕೂಲಿಯೇ ಜೀವನಗೂಲಿ ಅಥವಾ ಜೀವನ ನಿರ್ವಾಹಕೂಲಿ. ಅಂದರೆ ಅವರೇ ಮತ್ತೆ ಕೆಲವು ಕಡೆ ಹೇಳಿರುವ ಹಾಗೆ ಇದು ಕಾರ್ಮಿಕರಿಗೆ ಅಗತ್ಯವಾದ ಆಹಾರ ಬಟ್ಟೆ, ವಸತಿ, ಮಿತವಾದ ಸುಖಸೌಕರ್ಯ, ಕನಿಷ್ಠಕಾಲದಲ್ಲಿ ಆರ್ಥಿಕ ರಕ್ಷಣೆ, ಕಾರ್ಮಿಕರ ನೈಪುಣ್ಯವನ್ನು ಉತ್ತಮಗೊಳಿಸಲು ಅವಕಾಶ-ಇವೆಲ್ಲವನ್ನೂ ಒದಗಿಸಲು ಸಾಕಾಗುವ ಕೂಲಿ. 1912ರ ದಕ್ಷಿಣ ಆಸ್ಟ್ರೇಲಿಯದ ಅಧಿನಿಯಮವೂ ಹೀಗೆಯೇ ಇದನ್ನು ಅರ್ಥೈಸುತ್ತದೆ. ಒಂದು ಸ್ಥಳದಲ್ಲಿ ವಾಸಿಸುವ ಸಾಮಾನ್ಯ ಕಾರ್ಮಿಕರ ಸಹಜವಾದ ಹಾಗೂ ಸಕಾರಣವಾದ ಅಗತ್ಯಗಳನ್ನು ಪೂರೈಸಬಲ್ಲ ಹಣದ ಮೊತ್ತ-ಎಂದು ಅದು ಹೇಳುತ್ತದೆ. ಕಾರ್ಮಿಕರೂ ಅವರ ಕುಟುಂಬಗಳೂ ಸುಖಕರ ಹಾಗೂ ಸಭ್ಯ ಜೀವನ ನಡೆಸುವಂತೆ ಅವಕಾಶ ಮಾಡಿಕೊಡುವ ಕೂಲಿ-ಎಂಬುದು ಕೆನಡದ ಕಾರ್ಮಿಕ ಗಜೆóಟಿನಲ್ಲಿ ಪ್ರಕಟವಾಗಿರುವ ವ್ಯಾಖ್ಯೆ. ಜೀವನ ನಿರ್ವಾಹ ಕೂಲಿ ಗರಿಷ್ಠಮಟ್ಟದ ಕೂಲಿಯೆಂದೂ ಜೀವನಾಧಾರ ಕೂಲಿ ಕನಿಷ್ಠಮಟ್ಟದ ಕೂಲಿಯೆಂದೂ ಭಾರತದ ನ್ಯಾಯ ಕೂಲಿ ಸಮಿತಿ ತಿಳಿಸುತ್ತದೆ. ಇವೆರಡರ ನಡುವೆ ಅದು ವಿವರಿಸಿದ ಕೆಲವು ಅಂಶಗಳಿಗೆ ಅನುಗುಣವಾಗಿ, ನಿರ್ಧಾರವಾಗುವ ಕೂಲಿಯೇ ಅದರ ದೃಷ್ಟಿಯಲ್ಲಿ ನ್ಯಾಯ ಕೂಲಿ. ಪ್ರತಿಯೊಬ್ಬ ಕಾರ್ಮಿಕನಿಗೂ ಅವನಿಗೆ ಮತ್ತು ಅವನ ಕುಟುಂಬಕ್ಕೆ ಅತ್ಯಾವಶ್ಯಕವಾದ ಆಹಾರ, ಬಟ್ಟೆ, ವಸತಿಗಳನ್ನಷ್ಟೇ ಅಲ್ಲದೆ ಮಿತ ಪ್ರಮಾಣದ ಸುಖಸೌಕರ್ಯ, ಮಕ್ಕಳಿಗೆ ವಿದ್ಯಾಭ್ಯಾಸ, ಖಾಯಿಲೆ ಬಿದ್ದಾಗ ರಕ್ಷಣೆ, ಅವಶ್ಯಕವಾದ ಸಾಮಾಜಿಕ ಅಗತ್ಯಗಳು, ಮುಪ್ಪಿನ ಕಾಲದಲ್ಲಿ ಬೇಕಾಗುವ ಸಾಮಾಜಿಕ ವಿಮಾರಕ್ಷಣೆ-ಇವೆಲ್ಲವನ್ನೂ ಒದಗಿಸಬಲ್ಲ ಕೂಲಿಯೇ ಜೀವನ ನಿರ್ವಾಹ ಕೂಲಿ-ಎಂದು ಆ ಸಮಿತಿ ಹೇಳಿದೆ.

	ಮೇಲಿನ ವ್ಯಾಖ್ಯೆಗಳು ಜೀವನಗೂಲಿಯನ್ನು ಸಾಮಾನ್ಯ ಕಾರ್ಮಿಕರ ಸಹಜವಾದ ಹಾಗೂ ಸಮಂಜಸವಾದ ಅಗತ್ಯಗಳನ್ನು ಪೂರೈಸಬಲ್ಲ ಕೂಲಿಯೆಂದು ಅಸ್ಪಷ್ಟವಾದ ರೀತಿಯಲ್ಲಿ ವಿವರಿಸಿವೆ. ಆದರೆ ಸಾಮಾನ್ಯ ಕಾರ್ಮಿಕನ ಸಹಜವಾದ ಹಾಗೂ ಸಮಂಜಸವಾದ ಅಗತ್ಯಗಳಾವುವು? ಮತ್ತು ಸಾಮಾನ್ಯ ಕಾರ್ಮಿಕ ಯಾರು? ಎಂಬ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಕಾರ್ಮಿಕರ ಸಹಜವಾದ ಹಾಗೂ ಸಮಂಜಸವಾದ ಅಗತ್ಯಗಳನ್ನು ಆರ್ಥಿಕ ಜೀವನದ ನಾಲ್ಕು ಮಟ್ಟಗಳಲ್ಲಿ ಯಾವುದಾದರೊಂದರ ಆಧಾರದ ಮೇಲೆ ನಿರ್ಣಯಿಸಬಹುದು. ಮೊದಲನೆಯದಾಗಿ ಬಡತನದ ಮಟ್ಟ, ಎಂದರೆ ಕಾರ್ಮಿಕನ ವರಮಾನದಿಂದ ಅವನು ಜೀವಿಸುವುದಕ್ಕೆ ಅತ್ಯಾವಶ್ಯಕವಾಗಿ ಬೇಕಾದ ಎಲ್ಲವನ್ನೂ ಕೊಳ್ಳಲು ಸಾಧ್ಯವಾಗದ ಮಟ್ಟ; ಎರಡನೆಯದಾಗಿ ಜೀವನಾಧಾರ ಮಟ್ಟ, ಎಂದರೆ ಕಾರ್ಮಿಕ ತಾನು ಮತ್ತು ತನ್ನ ಕುಟುಂಬದ ಸದಸ್ಯರು ಜೀವಿಸುವುದಕ್ಕೆ ಅವಶ್ಯಕವಾದವನ್ನು ಮಾತ್ರ ಹೊಂದಬಲ್ಲ ಮಟ್ಟ; ಮೂರನೆಯದಾಗಿ ಆರೋಗ್ಯ ಮತ್ತು ದಕ್ಷತೆಯನ್ನು ಕಾಪಾಡಿಕೊಳ್ಳಲು ಮಾಡಬೇಕಾದ ಖರ್ಚನ್ನು ಒದಗಿಸುವ ಮಟ್ಟ; ಕೊನೆಯದಾಗಿ ಕನಿಷ್ಠ ಸುಖಸೌಕರ್ಯ ಮಟ್ಟ, ಎಂದರೆ ಜೀವನದ ವಿವಿಧ ಅಗತ್ಯಗಳನ್ನು ಕಾರ್ಮಿಕ ಹೊಂದಲು ಅವಕಾಶವೀಯುವ ಮಟ್ಟ. ಜೀವನಾಧಾರ ಮಟ್ಟಕ್ಕೆ ಅನುಸಾರವಾಗಿ ನಿರ್ಧರಿಸಲಾದ ಜೀವನ ನಿರ್ವಾಹ ಕೂಲಿ ಕನಿಷ್ಠ ಕೂಲಿಯಾಗಿಯೂ ಸುಖಸೌಕರ್ಯ ಮಟ್ಟದ ಆಧಾರದ ಮೇಲೆ ನಿರ್ಣಯಿಸಲಾದ ಜೀವನ ನಿರ್ವಾಹ ಕೂಲಿ ಗರಿಷ್ಠಮಟ್ಟದ್ದಾಗಿಯೂ ಇರುತ್ತದೆ. ಜೀವನಾಧಾರ ಮಟ್ಟದ ಕೂಲಿಯನ್ನು ಪ್ರತಿಯೊಬ್ಬ ಕಾರ್ಮಿಕನಿಗೂ (ಕೆಳದರ್ಜೆಯ ದೈಹಿಕ ಶ್ರಮಗಾರ) ಕೊಡುವುದು ಸಮರ್ಥನೀಯವಾದರೂ ಕನಿಷ್ಠ ಸುಖಸೌಕರ್ಯ ಮಟ್ಟದ ಕೂಲಿಯನ್ನು ಕಾರ್ಮಿಕನಿಗೆ ಅವನು ಕೈಗಾರಿಕೆಗೆ ಸಲ್ಲಿಸುವ ಕೊಡುಗೆಯ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಕೊಡುವುದು ಸಮರ್ಥನೀಯವಲ್ಲವೆನ್ನಲಾಗಿದೆ. ಏಕೆಂದರೆ ಆ ಕೂಲಿ ಹೆಚ್ಚಿನ ಮಟ್ಟದ್ದಾಗಿದ್ದು ಉದ್ಯಮಸಂಸ್ಥೆಯ ಅಥವಾ ಉದ್ಯಮಿಯ ಸಾಮಥ್ರ್ಯಕ್ಕೆ ಮೀರಿದ್ದಾಗಿರಬಹುದು. ಆದ್ದರಿಂದ ಜೀವನಗೂಲಿ ತತ್ವದ ಜಯಾಪಜಯಗಳು ಅದನ್ನು ನಿರ್ಣಯಿಸಲು ಆರಿಸಿಕೊಳ್ಳಬಹುದಾದ ಜೀವನಮಟ್ಟವನ್ನು ಅವಲಂಬಿಸುತ್ತವೆ. ಸಾಮಾನ್ಯ ಕಾರ್ಮಿಕ ಯಾರು ಎಂಬ ಪ್ರಶ್ನೆಗೆ ಉತ್ತರ ಸ್ವಯಂವೇದ್ಯ. ಮೊದಲೇ ಹೇಳಿರುವ ಹಾಗೆ ಜೀವನ ನಿರ್ವಾಹ ಕೂಲಿ ಅಸಂಘಟಿತ ಹಾಗೂ ಕೆಳದರ್ಜೆಯ ದೈಹಿಕ ಶ್ರಮಗಾರರಿಗೆ ಮಾತ್ರ ಅನ್ವಯಿಸುವುದರಿಂದ ಆ ಕಾರ್ಮಿಕನನ್ನೇ ಸಾಮಾನ್ಯ ಕಾರ್ಮಿಕನೆಂದು ಇಲ್ಲಿ ಪರಿಗಣಿಸಬೇಕಾಗುತ್ತದೆ. 

	ಮೇಲಿನ ಅಂಶಗಳೆಲ್ಲವನ್ನೂ ಗಮನಿಸಿದಾಗ ಭಾರತದ ನ್ಯಾಯ ಕೂಲಿ ಸಮಿತಿಯ ಜೀವನ ನಿರ್ವಾಹ ಕೂಲಿಯ ವ್ಯಾಖ್ಯೆ ವಿಶಾಲ ಅರ್ಥವ್ಯಾಪ್ತಿಯುಳ್ಳದ್ದಾಗಿದ್ದು ಅದು ಸರ್ವಸ್ವೀಕೃತವಾಗಿದೆಯೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಆ ಕೂಲಿಯ ಪ್ರಮಾಣವನ್ನು ನಿಗದಿ ಮಾಡುವಾಗಲೂ ಅದಕ್ಕೆ ಸಂಬಂಧಿಸಿದಂತೆ ವಾಸ್ತವಿಕ ಅಂಕಿ-ಅಂಶಗಳನ್ನು ಸಂಗ್ರಹಿಸುವಾಗಲೂ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. ಈ ಕಾರಣದಿಂದಲೇ ಜೀವನ ನಿರ್ವಾಹ ಕೂಲಿ ಯಾದೃಚ್ಛಿಕವಾಗಿ ನಿರ್ಣಯಿಸಲ್ಪಡುತ್ತದೆ. ಈ ಕೂಲಿಯ ಮೊತ್ತ ರಾಷ್ಟ್ರದಿಂದ ರಾಷ್ಟ್ರಕ್ಕೆ ವ್ಯತ್ಯಾಸಗೊಳ್ಳುತ್ತದೆ. ಉದಾಹರಣೆಗೆ ಆಸ್ಟ್ರೇಲಿಯ, ನ್ಯೂಜೀóಲೆಂಡ್, ಸಂಯುಕ್ತ ಸಂಸ್ಥಾನಗಳು, ಕೆನಡ ಮುಂತಾದ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಸಂಪತ್ತು ಹೇರಳವಾಗಿರುವುದರಿಂದ ಜೀವನ ನಿರ್ವಾಹ ಕೂಲಿ ಕನಿಷ್ಠ ಕೂಲಿಗೆ ಮೂಲಾಧಾರವಾಗಿದ್ದು, ಇವೆರಡಕ್ಕೂ ಹೆಚ್ಚು ವ್ಯತ್ಯಾಸ ಕಂಡುಬರುವುದಿಲ್ಲ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇವೆರಡಕ್ಕೂ ವ್ಯತ್ಯಾಸವಿರುತ್ತದೆ. ಈ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಸಂಪತ್ತು ಮಿತವಾಗಿರುವುದರಿಂದ ಜೀವನಗೂಲಿ ಅತಿ ಹೆಚ್ಚಿನ ಮಟ್ಟದ್ದಾಗಿರುತ್ತದೆ. ದೈಹಿಕ ಶ್ರಮಗಾರರಿಗೆ ಈ ಕೂಲಿ ಒಂದು ಗರಿಷ್ಠಮಟ್ಟದ ಮಾದರಿ ಕೂಲಿಯಾಗಿರುತ್ತದೆ. ಕಾರ್ಮಿಕರೇ ಅಲ್ಲದೆ ಸರ್ಕಾರಗಳೂ ಕಾರ್ಮಿಕ ಕ್ಷೇಮಾಭಿವೃದ್ಧಿಯಲ್ಲಿ ಆಸಕ್ತಿಯುಳ್ಳ ಇತರ ಸಂಸ್ಥೆಗಳೂ ಈ ಮಾದರಿ ಕೂಲಿಯನ್ನು ಮುಖ್ಯವಾಗಿ ಕೆಳದರ್ಜೆಯ ಹಾಗೂ ಅಸಂಖ್ಯಾತ ಕಾರ್ಮಿಕರಿಗೆ ಒದಗಿಸಿಕೊಡಲು ಸತತ ಪ್ರಯತ್ನ ನಡೆಸುತ್ತವೆ. ಜೀವನಗೂಲಿ ಈ ದೇಶಗಳಲ್ಲಿ ಒಂದು ಹೆಚ್ಚಿನ ಮಟ್ಟದ ಮಾದರಿ ಕೂಲಿಯಾಗಿರುವುದರಿಂದಲೂ ಅವುಗಳ ನೈಜಸಂಪತ್ತಿನ ದೃಷ್ಠಿಯಿಂದ ನೋಡಿದಾಗ ಇದು ಆ ದೇಶಗಳ ಅಳವಿಗೆ ಮೀರಿದುದರಿಂದಲೂ ಕಾರ್ಮಿಕರಿಗೆ ಅಲ್ಲಿ ಒಂದು ಜೀವನಾಧಾರ ಮಟ್ಟದ ಕೂಲಿಯನ್ನು ಒದಗಿಸುವ ಯತ್ನ ನಡೆದಿದೆ. ಜೀವನಗೂಲಿಯನ್ನು ಕಾರ್ಮಿಕರು ಪಡೆಯಬೇಕಾದರೆ ಅವರ ಉತ್ಪಾದಕತೆ ಹೆಚ್ಚಬೇಕಾಗುತ್ತದೆ.

	ಒಟ್ಟಿನಲ್ಲಿ ಜೀವನಗೂಲಿ ಒಂದು ನೈತಿಕ ತತ್ವ: ಆರ್ಥಿಕವಾಗಿ ಅದನ್ನು ಸಮರ್ಥಿಸುವುದು ಕಷ್ಟದ ಕೆಲಸ. ಧೀರ್ಘಕಾಲದಲ್ಲಿ ಅದು ಆರ್ಥಿಕ ಪರಣಾಮಗಳನ್ನುಂಟುಮಾಡಬಹುದು. ಸಾಕಷ್ಟು ಕಾಲಾವಕಾಶವನ್ನು ಕೊಟ್ಟರೆ ಅದು ಕಾರ್ಮಿಕ ಹಾಗೂ ಉದ್ಯಮಶೀಲರ ಕಾರ್ಯದಕ್ಷತೆಯನ್ನು ಉತ್ತಮಗೊಳಿಸಿ ಉತ್ಪಾದನೆಯನ್ನು ಅಧಿಕಗೊಳಿಸುತ್ತದೆ. ಆದರೆ ಕಾರ್ಮಿಕ ಉತ್ಪಾದನೆಯಲ್ಲಿ ಸಲ್ಲಿಸುವ ಸೇವೆ ಅಥವಾ ಕೊಡುಗೆಯನ್ನು ಅದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕೈಗಾರಿಕಾಸಂಸ್ಥೆಯ ಕೂಲಿ ನೀಡಿಕೆ ಸಾಮಥ್ರ್ಯವನ್ನು ಅದು ಗಣನೆಗೆ ತೆಗೆದುಕೊಳ್ಳಲಾಗದು. ಒಂದು ನಿರ್ದಿಷ್ಟ ಕೈಗಾರಿಕೆ ಉಚ್ಛ್ರಾಯಸ್ಥಿತಿಯಲ್ಲಿದ್ದಾಗ ಅದರ ಕಾರ್ಮಿಕರು ಕೊನೆಯ ಪಕ್ಷ ಜೀವನನಿರ್ವಾಹ ಕೂಲಿಯನ್ನಾದರೂ ಪಡೆಯಬೇಕಾದುದು ಸಮರ್ಥನೀಯವಾದುದು. ಆದರೆ ಲಾಭದಾಯಕವಲ್ಲದ ಕೆಲವು ಕೈಗಾರಿಕೆಗಳು ಸಮಾಜಕ್ಕೆ ಅವಶ್ಯಕವಾಗಿದ್ದಾಗ ಅದರ ಕಾರ್ಮಿಕರು ಜೀವನಗೂಲಿಯನ್ನು ತ್ಯಾಗಮಾಡಿ ಜೀವನಾಧಾರ ಕೂಲಿಯನ್ನು ಸ್ವೀಕರಿಸಬೇಕಾಗುತ್ತದೆ-ಎಂದು ವಾದಿಸಲಾಗಿದೆ. ಜೀವನಗೂಲಿ ಅಸ್ಪಷ್ಟ ಮತ್ತು ಅನಿರ್ದಿಷ್ಟವಾಗಿದ್ದರೂ ಅದು ಕಾರ್ಮಿಕರ ಜೀವನಾಧಾರ ಕೂಲಿಗಿಂತ ಹೆಚ್ಚಿನ ಮಟ್ಟದ್ದಾಗಿರುವುದರಿಂದಲೂ ಕನಿಷ್ಠ ಕೂಲಿಯ ನಿರ್ಣಯದಲ್ಲಿ ಆಧಾರವಾಗಿರುವುದರಿಂದಲೂ ಎಲ್ಲ ಕೈಗಾರಿಕಾ ರಾಷ್ಟ್ರಗಳಲ್ಲಿಯೂ ಅದು ಸಮಾಜದ ಬೆಳವಣಿಗೆಗೆ ಸಹಾಯಕವಾಗಿದೆಯೆಂದು ಅಂಗೀಕೃತವಾಗಿದೆ. ಒಂದು ರಾಷ್ಟ್ರದಲ್ಲಿ ಜೀವನಗೂಲಿಗೂ ಪ್ರಕೃತದಲ್ಲಿ ಜಾರಿಯಲ್ಲಿರುವ ಕೂಲಿಗೂ ಬಹಳ ಅಂತರವಿದ್ದು, ಜೀವನಗೂಲಿ ತತ್ವವನ್ನು ಅಲ್ಲಿ ಜಾರಿಗೆ ತರುವುದರಿಂದ ಆರ್ಥಿಕ ಬೆಳವಣಿಗೆಗೆ ಕುಂದುಂಟಾಗುವುದರಲ್ಲಿ ಸಂಶಯವಿರದಿದ್ದರೆ ಅಂಥ ರಾಷ್ಟ್ರದಲ್ಲಿ ಜೀವನಗೂಲಿಯನ್ನು ಹಂತಹಂತವಾಗಿ ಜಾರಿಗೆ ತಂದು ಕಾರ್ಮಿಕರ ವೇತನವನ್ನು ಉತ್ತಮಗೊಳಿಸುವುದರಿಂದ ಉತ್ಪಾದಕರು ಮತ್ತು ಕಾರ್ಮಿಕರು ಕಡಿಮೆ ಕೂಲಿಯ ದುಷ್ಪರಿಣಾಮಗಳಿಂದ ವಿಮುಕ್ತರಾಗುವುದರಲ್ಲಿ ಸಂಶಯವಿಲ್ಲ. 								(ಎಸ್.ಎನ್.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ